ಬೆಂಗಳೂರು: ಮಹಿಳೆಯರು ಸ್ನಾನ (Women Bath) ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದ ವಿಕೃತ ಕಾಮುಕನನ್ನ ಕಾಡುಗೋಡಿ ಪೊಲೀಸರು (Kadugodi Police) ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

ಹಾಜ ಮೊಯಿನುದ್ದಿನ್ ಬಂಧಿತ ಆರೋಪಿ. ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಚನ್ನಸಂದ್ರ ಮೂಲದ ಮೊಯಿನುದ್ದಿನ್, ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ (Mobile Video) ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದ. 

ಇದೇ ರೀತಿ ಕಳೆದ ಮಂಗಳವಾರ ಬೆಳಗ್ಗೆ 6:30ರ ಸುಮಾರಿಗೆ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ತಾಯಿ-ಮಗಳು ಬಾತ್‌ರೂಮ್‌ಗೆ ಸ್ನಾನಕ್ಕೆ ತೆರಳಿದ್ದಾರೆ. ಇದನ್ನ ಗಮನಿಸಿದ ಕಾಮುಕ ಮೊಯಿನುದ್ದಿನ್ ಕಿಟಕಿ ಮೂಲಕ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಮಗಳು ವಿಡಿಯೋ ಮಾಡೋದನ್ನ ಗಮನಿಸಿದ್ದಾಳೆ. ಬಳಿಕ ಹೊರಗೆ ಬಂದು ತಂದೆಗೆ ಹೇಳಿದ್ದಾಳೆ.

ಬಾಲಕಿ ತಂದೆ ಹೋಗಿ ನೋಡುವಷ್ಟರಲ್ಲಿ ಕಾಮುಕ ಅಲ್ಲಿಂದ ಎಸ್ಕೇಪ್‌ ಆಗಿದ್ದ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ವಿಡಿಯೋವನ್ನೂ ಡಿಲೀಟ್‌ ಮಾಡಿದ್ದಾರೆ.