ಬೆಂಗಳೂರು, ಆಗಸ್ಟ್ 15: ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ನನ್ನನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ, ಅವರ ಮಾತನ್ನು ಹೈಕಮಾಂಡ್ನವರು ಕೇಳಲೇ ಇಲ್ಲ. ಏಕೆಂದರೆ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗಿತ್ತು’ ಎಂದು ಇತ್ತೀಚೆಗೆ ಸಚಿವ ಸ್ಥಾನದಿಂದ ವಜಾಗೊಂಡ ಕೆ.ಎನ್ ರಾಜಣ್ಣ ಅವರು ತಮ್ಮ ಪದತ್ಯಾಗದ ಬಗ್ಗೆ ರಹಸ್ಯ ಬಿಚ್ಚಿಟ್ಟಿದ್ದಾರೆ.
ಅಸಹಾಯಕರಾದ ಸಿಎಂ ಸಿದ್ದರಾಮಯ್ಯ!
‘ಅವರು (ಸಿಎಂ ಸಿದ್ದರಾಮಯ್ಯ) ಮನೆಯಿಂದ ವಿಧಾನಸೌಧಕ್ಕೆ ಬರುವ ಹೊತ್ತಿಗೆ ನೀವು ಮಾಧ್ಯಮದವರೇ ತೋರಿಸಿರುವಂತೆ ಕಾರಲ್ಲಿ ಬಾಗಿಲು ಹಾಕೊಂಡು ಮಾತನಾಡುತ್ತಾ ಇದ್ದರಲ್ಲವೇ. ಅದು ಅದೇ ನನ್ನ ಸಚಿವ ಸ್ಥಾನದ ರಾಜೀನಾಮೆ ವಿಷಯ. ಕಾರಲ್ಲಿ ಬಾಗಿಲು ಹಾಕಿಕೊಂಡು ಸಿಎಂ ಸಿದ್ದರಾಮಯ್ಯ ಅವರು ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾರೆ. ಪಾಪ ಅವರು ಕೈ ಹೈಕಮಾಂಡ್ ಅನ್ನು ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಹೈಕಮಾಂಡ್ ಒಪ್ಪಲೇ ಇಲ್ಲ. ತಮ್ಮ ಈ ಕೊನೆಯ ಕ್ಷಣದ ಪ್ರಯತ್ನದ ಬಗ್ಗೆ ಈ ವಿಷಯವನ್ನು ನನಗೆ ಅವರು ತಿಳಿಸಿದರು. ವಿಧಿ ಇಲ್ಲ, ನಾನೇನು ಮಾಡಲಿ ಸಾರಿ ಎಂದರು.
‘ಅದಕ್ಕೆ ನಾನು ಆಯ್ತು ಸರ್ ಎಂದೆ’ ಎಂದು ಕೆ.ಎನ್ ರಾಜಣ್ಣ ತಮ್ಮ ಪದತ್ಯಾಗದ ಪ್ರಸಂಗವನ್ನು ಹೀಗೆ ಬಿಡಿಸಿ ಹೇಳಿದರು.

